ಕೃಷ್ಣ ಅಗರು ಮರ
ತೈಮೀಲಿಯೇಸಿ ಕುಟುಂಬಕ್ಕೆ ಸೇರಿದ ದೊಡ್ಡಮರ.  ಅಕ್ವಿಲೇರಿಯ ಅಗಲೋಚ ಇದರ ಶಾಸ್ತ್ರೀಯ ನಾಮ.  ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಇದನ್ನು ಈಗಲ್‍ವುಡ್ ಎನ್ನಲಾಗುತ್ತದೆ.  ಭಾರತದ ಮೂಲವಾಸಿಯಾದ ಇದು ಭಾರತದ ಪೂರ್ವಭಾಗ, ಭೂತಾನ್, ಅಸ್ಸಾಂ ರಾಜ್ಯದ ಖಾಸಿಯ, ಗ್ಯಾರೊ, ನಾಗಾ, ಕಚಾರ್ ಬೆಟ್ಟಗಳಲ್ಲಿ ಬೆಳೆಯುತ್ತದೆ.  ಇದು ಸದಾ ಹಸಿರಾಗಿರುವ ಮತ್ತು ಸುಮಾರು 60'-70' ಎತ್ತರಕ್ಕೆ ಬೆಳೆಯುವ ದೊಡ್ಡ ಮರ.  ಇದರ ಕಾಂಡದ ಸುತ್ತಳತೆ 5'-8'ಗಳವರೆಗೂ ಇರುತ್ತದೆ.  ಇದರ ಚೌಬೀನೆ ಮೃದು ಮತ್ತು ಹಗುರ; ಇದಕ್ಕೆ ವಿಸ್ತರಣ ಶಕ್ತಿ ಉಂಟು.  ಇದರ ಬಣ್ಣ ಬಿಳಿ ಅಥವಾ ನಸುಹಳದಿ.  ಚೌಬೀನೆ ಬಾಳಿಕೆ ಬರುವಂಥದಲ್ಲ.  ಇದನ್ನು ಬರ್ಮದ ಕಾರೆನ್ಸ್ ಜನಾಂಗದವರು ಬಿಲ್ಲುಗಳನ್ನು ಮತ್ತು ವಾಕಿಂಗ್ ಸ್ಟಿಕ್‍ಗಳನ್ನು ತಯಾರಿಸಲು ಬಳಸುತ್ತಾರೆ.  

	ಕೃಷ್ಣ ಅಗರು ಮರದ ಚೌಬೀನೆಯ ಅತ್ಯಂತ ಒಳಭಾಗದಲ್ಲಿ ಒಂದು ರೀತಿಯ ಸುವಾಸನಾಯುಕ್ತವಾದ ರಾಳ ಮತ್ತು ಚಂಚಲ ತೈಲಗಳ ಮಿಶ್ರಣವಿದೆ.  ಕಾಂಡದಲ್ಲಿ ರೆಂಬೆಗಳು ಹೊರಡುವ ಭಾಗದಲ್ಲೇ ಈ ವಸ್ತುವಿನ ಪ್ರಮಾಣ ಹೆಚ್ಚು. ಈ ಭಾಗದ  ಬಣ್ಣ ಕಡುಕೆಂಪು, ಈ ಮಿಶ್ರಣಕ್ಕೆ ಅಗರು ಅಥವಾ ಕೃಷ್ಣ ಅಗರು ಎಂಬ ವಾಣಿಜ್ಯನಾಮವಿದೆ.  ಇದರ ಉತ್ಪತ್ತಿಯ ಕಾರಣ ಮರಕ್ಕೆ ಬೂಷ್ಟು ರೋಗವೊಂದು ಅಂಟುವುದರಿಂದ ಎಂದು ನಂಬಲಾಗಿದೆ.  ಅಗರಿನ ಉತ್ಪತ್ತಿಗೆ ಕಾರಣವಾದುದೆಂದು ನಂಬಲಾದ ಬೂಷ್ಟಿನ ಎಳೆಗಳನ್ನೂ ಕಂಡುಹಿಡಿಯಲಾಗಿದೆ.  ಅಲ್ಲದೆ ಅಗರು ಇರುವ ಮರಗಳಿಂದ ಗೂಟಗಳನ್ನು ತಯಾರಿಸಿ ಬೇರೆ ಆರೋಗ್ಯವಂತ ಮರಗಳಿಗೆ ಹೊಡೆದು ನುಗ್ಗಿಸುವುದರಿಂದ ಈ ರೋಗವನ್ನು ಉಂಟುಮಾಡಬಹುದೆಂದು ಗೊತ್ತಾಗಿದೆ.  ಈ ರೋಗ ಬಲಿಯಲು ಬಹಳ ವರ್ಷಗಳು ಬೇಕು.  ಚೆನ್ನಾಗಿ ಬಲಿತ ಮರ ಅಂದರೆ ಸುಮಾರು 50 ವರ್ಷಗಳಾದ ಮರದಲ್ಲಿ ಅಗರಿನ ಸಾರತೆ ಹೆಚ್ಚಾಗಿರುತ್ತದೆ.  ಕೆಲವು ಸಲ ತೊಗಟೆಯ ಒಳಗಿನ ಜೀವಕೋಶಗಳ ಸಮುದಾಯವೆಲ್ಲವೂ ಅಗರುಮಯವಾಗಿರುತ್ತದೆ.

	ಕೃಷ್ಣ ಅಗರು ನೀರಿಗಿಂತ ಭಾರ.  ಈ ಗುಣವನ್ನು ಕೆಲವು ಸಲ ಚೌಬೀನೆಯ ದರ್ಜೆಯನ್ನು ಗುರುತಿಸಲು ಉಪಯೋಗಿಸುತ್ತಾರೆ.  ಅಗರಿಲ್ಲದ ಮರ ನೀರಿನಲ್ಲಿ ತೇಲುತ್ತದೆ.  ಅಗರಿಗೆ ಸ್ವಲ್ ಕಹಿ ರುಚಿಯೂ ಒಂದು ಬಗೆಯ ವಿಚಿತ್ರವಾದ ಆದರೆ ಹಿತವಾದ ವಾಸನೆಯೂ ಉಂಟು.  ವಾಸನೆಯನ್ನು ಕೊಂಚಮಟ್ಟಿಗೆ ಗಂಧದ ಮರದ ಇಲ್ಲವೆ ಪನ್ನಂಬರದ (ಆಂಬರ್ ಗ್ರೀಸ್) ವಾಸನೆಗೆ ಹೋಲಿಸಬಹುದು.  ಇದರ ಬಣ್ಣ ಕಂದು, ಬಲು ಗಡುಸಾದ ಇದರಲ್ಲಿ ಹೆಚ್ಚು ಮೊತ್ತದಲ್ಲಿ ರಾಳ (ರೆಸಿóನ್) ಇದೆ.  ಅಗರು ಪ್ರಜ್ವಲಿತವಾಗಿ ಇಲ್ಲವೆ ಜ್ವಾಲೆಯಿಲ್ಲದೆ ಉರಿಯುತ್ತದೆ. ಉರಿಯುವಾಗ ಅಪ್ಯಾಯಮಾನವಾದ ಸುವಾಸನೆಯನ್ನು ನೀಡುತ್ತದೆ.  ಮಾರುಕಟ್ಟೆಗಳಲ್ಲಿ ಚಕ್ಕೆ ಮತ್ತು ಸಿಬಿರುಗಳ ರೂಪದಲ್ಲಿ ಇಲ್ಲವೆ ಸುಮಾರು ಒಂದು ಪೌಂಡು ತೂಕದ ತುಂಡುಗಳ ರೂಪದಲ್ಲಿ ದೊರೆಯುತ್ತದೆ.  ಇದನ್ನು ಸಾಮಾನ್ಯವಾಗಿ ಪಾರ್ಸಿಗಳು, ಅರಬ್ಬೀ ದೇಶದವರು ಧೂಪ ಹಾಕುವ ವಸ್ತುವಾಗಿ ಉಪಯೋಗಿಸುತ್ತಾರೆ.  ಅಸ್ಸಾಮಿನ ಸಿಲ್ಹೆಟ್ ಪ್ರದೇಶದ ಅಗರಿಗೆ ಹೆಚ್ಚು ಬೆಲೆ.  ಅಗರಿನ ಒಂದು ಬಗೆಯಾದ ಧಮ್ ಎಂಬುದು ಮೃದುವಾಗಿದೆ.  ಅದರ ಬಣ್ಣ ಹಳದಿ ಮಿಶ್ರಿತ ಬಿಳಿ.  ಆದರೆ ಇದು ಕೀಳುದರ್ಜೆಯದು.  ಇದನ್ನು ಬಟ್ಟಿ ಇಳಿಸಿ ಒಂದು ರೀತಿಯ ಚಂಚಲ ತೈಲವನ್ನು ತೆಗೆಯುತ್ತಾರೆ.  ಇದಕ್ಕೆ ಅಗರು ಅತ್ತರ್ ಎಂಬ ಹೆಸರಿದೆ.  ಗುಲಾಬಿ ಅತ್ತರಿನಷ್ಟೇ ಬೆಲೆಯಿರುವ ಇದಕ್ಕೆ ಸುವಾಸನೆಯನ್ನು ದೀರ್ಘಕಾಲದವರೆಗೂ ಉಳಿಯುವಂತೆ ಮಾಡುವ ಶಕ್ತಿಯಿದೆ.  ಆದ್ದರಿಂದ ಯೂರೋಪಿನ ಸುಗಂಧದ್ರವ್ಯ ತಯಾರಕರು ಅತ್ಯುತ್ತಮ ದರ್ಜೆಯ ಸುಗಂಧ ದ್ರವ್ಯಗಳೊಂದಿಗೆ ಸೇರಿಸಲು ಇದನ್ನು ಉಪಯೋಗಿಸುತ್ತಾರೆ.  ಬಟ್ಟೆ ಮತ್ತು ಚರ್ಮದ ಮೇಲೆ ಅಗರು ಹುಡಿಯನ್ನು ಚಿಮುಕಿಸುವುದರಿಂದ ಚಿಗಟ ಮತ್ತು ಹೇನುಗಳನ್ನು ತಡೆಗಟ್ಟಬಹುದು.  ಅಗರಿಗೆ ಉತ್ತೇಜಕ, ಬಲವರ್ಧಕ ಮತ್ತು ವಾತಹರ ಗುಣಗಳೂ ಇವೆಯೆಂದು ಹೇಳಲಾಗಿದೆ.  ಮಲಯದಲ್ಲಿ ಇದನ್ನು ಅನೇಕ ಚರ್ಮರೋಗಗಳ ನಿವಾರಣೆಗೆ ಮತ್ತು ಕಾಂತಿವರ್ಧನೆಗೆ ಬಳಸುವರು.  ಇದನ್ನು ಈಗ ಹೆಚ್ಚಾಗಿ ಧೂಪದ ಮತ್ತು ಅಗರು ಬತ್ತಿಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.  ಸುವಾಸನಾಯುಕ್ತವಾದ ಚೌಬೀನೆ ಬಹಳ ಕಾಲ ಬಾಳಿಕೆ ಬರುವುದಿಲ್ಲವಾದರೂ ಬೀರು ಮತ್ತು ಕೆತ್ತನೆ ಕೆಲಸಗಳಲ್ಲಿ ಇದನ್ನು ಉಪಯೋಗಿಸಿವುದುಂಟು.  ಈ ಮರದ ತೊಗಟೆ ಬಹಳ ಉದ್ದ.  ಅದು ತೆಳುನಾರಿನಂತಿದೆ.  ಹಿಂದೆ ಅಸ್ಸಾಮನಲ್ಲಿ ಬಹಳ ಕಾಲದವರೆಗೂ ಈ ತೊಗಟೆಯಿಂದ ಒಂದು ರೀತಿಯ ಕಾಗದವನ್ನು ತಯಾರಿಸುತ್ತಿದ್ದರು. ಅಲ್ಲದೆ ಇದರಿಂದ ಹಗ್ಗಗಳನ್ನು ತಯಾರಿಸುವುದಿದೆ. 		     
    (ಕೆ.ಜಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ